ಅತಿಥಿಸತ್ಕಾರ
	
ಆಗಂತುಕರಿಗೆ ಅನ್ನಾಹಾರಗಳನ್ನೂ ವಸತಿಯನ್ನೂ ನೀಡುವ ಪದ್ಧತಿ. ಪ್ರಾಚೀನರಲ್ಲಿ ಇದನ್ನು ಕೃಷಿಕಜನರಲ್ಲಿ ಹೆಚ್ಚಾಗಿ ಕಾಣುತ್ತೇವೆ. ಬೇಟೆಗಾಗಿ ವಲಸೆಹೋಗುವ ಗುಂಪಿನಲ್ಲಿ ಈ ಪದ್ಧತಿ ಕಂಡುಬರುವುದಿಲ್ಲ. ಅಲ್ಲದೆ ಬಂದವರೆಲ್ಲರಿಗೂ ಸಹಾನುಭೂತಿಯ ಸತ್ಕಾರ ಸಿಗುತ್ತಿರಲಿಲ್ಲ; ತಮ್ಮ ಜಾತಿಗೆ ಸೇರಿದವರನ್ನು ಸತ್ಕರಿಸುವ ಸಂಪ್ರದಾಯ ಬೆಳೆದಿತ್ತು. ಅತಿಥಿಗಳಾದ ತಮಗೂ ಅದೇ ರೀತಿ ಸತ್ಕಾರ ಸಿಗಲೆಂಬ ನಿರೀಕ್ಷೆಯೂ ಇತ್ತೆನ್ನಬಹುದು. ಕೆಲವು ನಾಗರಿಕ ಜನರಲ್ಲಿ ಪ್ರವಾಸಿಗಳನ್ನು ಸತ್ಕರಿಸುವ ರೂಢಿ ಕಾಣಬಹುದಾಗಿತ್ತು.  ಕೆಲವು ಪಂಗಡಗಳವು ಅತಿಥಿಗಳಿಗೆ ತಮ್ಮ ಪತ್ನಿಯನ್ನೂ ಒಪ್ಪಿಸುತ್ತಿದ್ದರು. ಕೃಷಿಕ ಜನಾಂಗದಲ್ಲಿ ಅತಿಥಿಸತ್ಕಾರ ಸದ್ವರ್ತನೆಯನ್ನೂ ಔದಾರ್ಯವನ್ನೂ ಸೂಚಿಸುತ್ತಿತ್ತು. ಅತಿಥಿಗೆ ಔತಣವೇರ್ಪಡಿಸಿ ಅವನು ಅಪೇಕ್ಷಿಸಿದುದನ್ನು ನೀಡುತ್ತಿದ್ದರಲ್ಲದೆ ಉಡುಗೊರೆಯನ್ನು ಕೊಡುತ್ತಿದ್ದರು. 
	
ಅತಿಥಿಸತ್ಕಾರ ಮಾಡುವುದಕ್ಕೆ ಕೆಲವು ಸಾಮಾಜಿಕ ಅಂಶಗಳೂ ಕಾರಣವಾಗಿದ್ದುವು. ಮತಧರ್ಮದ ನಿಯಮಗಳು, ಅಭ್ಯಾಗತರಿಂದ ಕೇಡು ಸಂಭವಿಸಬಹುದೆಂಬ ಭೀತಿ, ವ್ಯಾಪಾರಕ್ಕಾಗಿ ಸ್ವಾಗತಿಸುವುದು, ತಮ್ಮ ವೈಭವವನ್ನು ಪ್ರದರ್ಶಿಸಬೇಕೆಂಬ ಹಂಬಲ ಮತ್ತು ಅತಿಥಿಯಿಂದ ಪರಸ್ಥಳದ ವಿಚಾರ ತಿಳಿದುಕೊಳ್ಳುವ ಬಯಕೆ-ಇವು ಇಂಥ ಅಂಶಗಳು. ನಾಗರಿಕರಲ್ಲಿ ಅತಿಥಿಸತ್ಕಾರಕ್ಕೆ ನೈತಿಕ ಬೆಲೆಯನ್ನೂ ಕೊಡಲಾಗಿತ್ತು. ಅದನ್ನು ಪವಿತ್ರಕರ್ತವ್ಯವೆಂದೂ ಭಾವಿಸಲಾಗಿತ್ತು. ಅತಿಥಿ ಸ್ನೇಹಸೂಚಕವರ್ತನೆಯನ್ನು ತೋರಿಸಬೇಕೆಂಬ ನಿಬಂಧಗಳಿದ್ದುವು. ಹೋಮರ್ ತನ್ನ ಕಾವ್ಯದಲ್ಲಿ ಗ್ರೀಕರ ಅತಿಥಿಸತ್ಕಾರದ ಸಂಪ್ರದಾಯವನ್ನು ಚಿತ್ರಿಸಿದ್ದಾನೆ. ಅತಿಥಿಗೆ ಆಹಾರ, ವಸ್ತ್ರ, ವಸತಿ-ಇವುಗಳನ್ನು ಒದಗಿಸಿ ಅನಂತರ ಅವನ ಪೂರ್ವೋತ್ತರವನ್ನು ಕೇಳುತ್ತಿದ್ದರು. ಉಡುಗೊರೆಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದರು. ಕ್ರೈಸ್ತರಲ್ಲಿಯ ಮಧ್ಯಯುಗದಲ್ಲಿ ಅತಿಥಿಸತ್ಕಾರಕ್ಕೆ ಮತಧರ್ಮದ ಅಂಗವಾಗಿ ಸ್ಥಾನವನ್ನು ಕೊಡಲಾಗಿತ್ತು, ಕ್ರೈಸ್ತಮಠಗಳು ಅತಿಥಿಸತ್ಕಾರಕ್ಕೆ ವಿಶೇಷ ಏರ್ಪಾಟುಗಳನ್ನು ಮಾಡಿದ್ದುವು. ಅತಿಥಿಗೆ ಅನಾದರ ಮಾಡಿದವರನ್ನು ಗೌರವದಿಂದ ಕಾಣುತ್ತಿರಲಿಲ್ಲ. ಕೆಲವು ಪಂಗಡದವರು ಅತಿಥಿಗೆ ಅಗೌರವ ತೋರುವುದನ್ನು ಶಿಕ್ಷಾರ್ಹವಾದ ಅಪರಾಧವೆಂದೂ ಭಾವಿಸಿದ್ದರು. 
	
ಅತಿಥಿಸತ್ಕಾರವನ್ನು ಸರ್ಕಾರದಿಂದ ಕಾನೂನುಬದ್ಧವಾಗಿ ಮಾಡಿರುವುದನ್ನೂ ಕೆಲವು ಜನಾಂಗಗಳಲ್ಲಿ ಕಾಣುತ್ತೇವೆ. ಇಂಥ ಸತ್ಕಾರದಿಂದ ರಾಜಕೀಯ ಒಪ್ಪಂದಗಳನ್ನೂ ಮಾಡಿಕೊಳ್ಳಲಾಗುತ್ತಿತ್ತು. ಪೆರಿಕ್ಲೀಸನು ಸ್ಪಾರ್ಟಾದೇಶದ ದೊರೆಯೊಂದಿಗೆ ಇಂಥ ಒಪ್ಪಂದವನ್ನು ಮಾಡಿಕೊಂಡನೆಂದು ಇತಿಹಾಸದಲ್ಲಿ ಕಾಣುತ್ತೇವೆ. ರಾಯಭಾರಿಗಳಂತೆ ಮುಖ್ಯಸ್ಥರನ್ನು ಅತಿಥಿಗಳನ್ನಾಗಿ ಪರದೇಶಗಳಿಗೆ ಕಳುಹಿಸುವುದನ್ನು ರಾಜಕೀಯದಲ್ಲಿ ಈಗಲೂ ಕಾಣುತ್ತೇನೆ. 
	
ಹಿಂದೂ ಜನಾಗಂದಲ್ಲಿ ಪ್ರಚೀನ ಕಾಲದಿಂದಲೂ ಅತಿಥಿಸತ್ಕಾರಕ್ಕೆ ಮಹತ್ತ್ವ ಕೊಡಲಾಗಿದೆ. ಅತಿಥಿದೇವೋ ಭವ ಅಂದರೆ ಅತಿಥಿ ದೇವರ ಸಮಾನ ಎಂದು ಶಾಸ್ತ್ರಗಳು ಹೇಳಿವೆ. ಬಲಿಚಕ್ರವರ್ತಿ ಯಾಗಸಮಯದಲ್ಲಿ ಬಂದ ವಾಮನನಿಗೆ ತನ್ನ ರಾಜ್ಯವನ್ನೇ ದಾನಮಾಡಿ ತಾನು ಅವನ ದಾಸನಾದ ಕಥೆ ಇದೆ. ಅತಿಥಿಗಳು ಏನು ಅಪೇಕ್ಷಿಸಿದರೂ ಅದನ್ನು ನಡೆಸಿಕೊಡಲೇಬೇಕೆಂಬ ಧರ್ಮವನ್ನು ಅಂದಿನವರು ಅವಲಂಬಿಸಿದ್ದರು. 
	
ಉಪ್ಪು ತಿಂದ ಮನೆಗೆ ಎರಡೆಣಿಸಬಾರದೆಂದು ಅತಿಥಿಯೂ ತನ್ನ ಧರ್ಮವನ್ನು ಪಾಲಿಸಬೇಕಾಗಿತ್ತು ; ದುರ್ಯೋಧನನ ಮನೆಯಲ್ಲಿ ಆಶ್ರಯವನ್ನು ಪಡೆದ ಕರ್ಣ ಸ್ವಾಮಿದ್ರೋಹಮಾಡಲೊಪ್ಪದೆ ತನಗಾಗಬಹುದಾದ ಅಮಿತ ಲಾಭವನ್ನೂ ನಿರಾಕರಿಸಿ ಸಾವನ್ನೇ ಸ್ವಾಗತಿಸಿದ. ದೂರ್ವಾಸ ತನ್ನ ಶಿಷ್ಯಪರಂಪರೆಯೊಂದಿಗೆ ಪಾಂಡವರ ಸತ್ತ್ವಪರೀಕ್ಷೆಗಾಗಿ ಅತಿಥಿಯಾಗಿ ಹೋದ ಕಥೆ ಜನಪ್ರಿಯವಾಗಿದೆ. 
	
ಕೃಷ್ಣನಿಗೆ ವಿದುರನ ಆತಿಥ್ಯ, ಕೃಷ್ಣ ತನ್ನ ಬಾಲ್ಯಸ್ನೇಹಿತನಾದ ಅತಿದರಿದ್ರನಾದ ಕುಚೇಲನಿಗೆ ಮಾಡಿದ ಆತಿಥ್ಯ. ಶ್ರೀರಾಮಚಂದ್ರನಿಗೆ ಅರಣ್ಯದಲ್ಲಿ ಋಷಿಗಳು ನೀಡಿದ ಅತಿಥಿಸತ್ಕಾರ-ಇವು ಹಿಂದೂಗಳು ಅತಿಥಿಸತ್ಕಾರಕ್ಕೆ ಕೊಡುವ ಮಹತ್ತ್ವದ ಪ್ರಸಿದ್ಧ ನಿದರ್ಶನಗಳಾಗಿವೆ.									
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ